New

ಎಸ್.ಎಸ್.ಎಲ್.ಸಿ. ಗಣಿತ ವಿಷಯ ಎಸ್.ಎಸ್.ಎಲ್.ಸಿ 2021 ಮಾದರಿ ಪ್ರಶ್ನೆ ಪತ್ರಿಕೆ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಬಿಡುಗಡೆಯಾಗಿದ್ದು ಇಲ್ಲಿ ಲಭ್ಯವಿದೆ...ಖ್ಯಾತ ಮನಶಾಸ್ತ್ರಜ್ಞರಾದ ಥಾನ೯ಡೈಕ್ ರವರ ಅದ್ಭುತ ಸಾಲುಗಳು ನೀವು ಓಡುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಡೆಯುತ್ತಾರೆ.ನೀವು ನಡೆಯುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಿಲ್ಲುತ್ತಾರೆ.ನೀವು ನಿಂತಿದ್ದರೆ,ನಿಮ್ಮ ಮಕ್ಕಳು ಮಲಗುತ್ತಾರೆ.ನೀವು ಮಲಗಿದ್ದರೆ,ನಿಮ್ಮ ಮಕ್ಕಳು ನಿದ್ರಿಸುತ್ತಾರೆ.ನೀವು ನಿಮ್ಮ ತರಗತಿಯಲ್ಲಿ ನಿದ್ರಿಸುತ್ತಿದ್ದರೆ,ನಿಮ್ಮ ಮಕ್ಕಳು ಸಾಯುತ್ತಾರೆ.ಶಿಕ್ಷಕರಾದ ನಾವುಗಳು ಸದಾ ಕ್ರಿಯಾಶೀಲರಾಗಿದ್ದು ಮಕ್ಕಳಲ್ಲಿ ಚೈತನ್ಯದ ಚಿಲುಮೆಯ ಮೂಲವಾಗೋಣ..." ಮಕ್ಕಳು- ನಮ್ಮ ಕನಸುಗಳು "

Wednesday 15 November 2017

ಯೇನಪೋಯ ಶಿಕ್ಷಕ ಪ್ರಶಸ್ತಿ ಪ್ರಧಾನ






ಇಂದು ಯೇನಪೋಯ ಯೂನಿವರ್ಯೇಸಿಟಿ ಕ್ಯಾಂಪಸ್ ನಲ್ಲಿ ಯೇನಪೋಯ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.ಪ್ರಶಸ್ತಿಯನ್ನು ಗೌರವಾನ್ವಿತ ಮಾಜಿ ಲೋಕಾಯುಕ್ತ ಮುಖ್ಯಸ್ಥರೂ,ಸುಪ್ರೀಂ  ಕೋರ್ಟ್ ಮಾಜಿ ನ್ಯಾಯಾಧೀಶರೂ ಆಗಿರುವ ಶ್ರೀ ಸಂ ತೋಷ್ ಹೆಗ್ದೆ ವಿತರಿಸಿದರು. ಸಮಾರಂಭದಲ್ಲಿ ನಾನಾಡಿದ ಮಾತುಗಳು
""ಇಂದಿನ ಸಮಾರಂಭದಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಸಂತೋಷ್ ಹೆಗ್ಡೆಯವರೇ, ವೇದಿಕೆಯಲ್ಲಿರುವ ಯೇನಪೋಯ ಶಿಕ್ಷಣ ಸಂಸ್ಥೆಯ ಕುಟುಂಬ ಸದಸ್ಯರೇ, ವೇದಿಕೆಯ ಮುಂಭಾಗದಲ್ಲಿರುವ ಗಣ್ಯಾತಿ ಗಣ್ಯರೇ, ಹಾಗೂ ನನ್ನ ಪ್ರೀತಿಯ ವಿದ್ಯಾರ್ಥಿಗಳೇ,
ನನ್ನ ಜೀವನದ ಅತ್ಯಂತ ಸಂತೋಷದ ದಿನಗಳಲ್ಲಿ ಇಂದು ಒಂದು. ಹಳ್ಳಿಯಲ್ಲಿರುವ ಒಂದು ಸರಕಾರಿ ಶಾಲೆಯಲ್ಲಿ ದುಡಿಯುತ್ತಿರುವ ಒಬ್ಬ ಸಾಮಾನ್ಯ ಶಿಕ್ಷಕನಾದ ನನ್ನನ್ನು ಯೇನಪೋಯ ಸಂಸ್ಥೆಯು ಗುರುತಿಸಿ ಗೌರವಿಸಿರುವ ಈ ಕ್ಷಣ ನನ್ನ ಜೀವನದ ಮಹೋನ್ನತ ಕ್ಷಣಗಳಲ್ಲಿ ಒಂದು ಎಂದು ತಿಳಿಸಲು ಸಂತೋಷಪಡುತ್ತಿದ್ದೇನೆ. ಇದಕ್ಕಿಂತಲೂ ಮಿಗಿಲಾಗಿ ಈ ಪ್ರಶಸ್ತಿಯನ್ನು ನಮ್ಮ ಭಾರತ ದೇಶದ ಪ್ರತಿಯೊಬ್ಬರೂ ಗೌರವಿಸುವ, ಸಚ್ಚಾರಿತ್ರ್ಯವುಳ್ಳ, ಪ್ರಾಮಾಣಿಕ ವ್ಯಕ್ತಿತ್ವದ ಶ್ರೀ ಸಂತೋಷ್ ಹೆಗ್ಡೆಯವರ ಕೈಗಳಿಂದ ಪಡೆದಿರುವುದ ನನಗೆ ರೋಮಾಂಚನವನ್ನುಂಟು ಮಾಡಿದೆ. ಈ ಕಾರಣಕ್ಕಾಗಿ ಈ ದಿನ ನನ್ನ ಜೀವನದ ಕೊನೆ ತನಕವು ಸ್ಮರಿಸಲ್ಪಡುತ್ತದೆ ಎಂದು ಈ ವೇದಿಕೆಯಿಂದ ಹೇಳ ಬಯಸುತ್ತೇನೆ.
ಶಿಕ್ಷಕ ವೃತ್ತಿ ಪವಿತ್ರವಾದದ್ದು ಎಂದು ನಂಬಿರುವವ ನಾನು. ಆದರೆ ಈ ವೃತ್ತಿ ಜೀವನದಲ್ಲಿ ಅನೇಕ ನೋವನ್ನೂ ಅನುಭವಿಸಿರುತ್ತೇನೆ. ವೃತ್ತಿಯನ್ನು ತೊರೆಯಬಾರದೇಕೆ? ಎಂಬ ನಿರ್ಧಾರಕ್ಕೂ ಬಂದಿದ್ದೆ. ಆದರೆ ನನ್ನ ಸ್ನೇಹಿತರು ನನಗೆ ನಿಷ್ಠೆಯ ಪಾಠ ಬೋಧಿಸಿದರು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ದೇವರು ಒಂದಲ್ಲ ಒಂದು ದಿನ ಯಶಸ್ಸು ನೀಡುತ್ತಾನೆ ಎಂದು ತಿಳಿಹೇಳಿದರು. ಆ ಮಾತು ಇಂದು ಸತ್ಯವಾಗಿದೆ. ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಒಂದು ವೃತ್ತಿಯಲ್ಲಿ ದುಡಿದರೆ ಅದರ ಪ್ರತಿಫಲ ಏನು ಎಂಬುದಕ್ಕೆ ಈ ವೇದಿಕೆ ಹಾಗೂ ಇಲ್ಲಿ ಸೇರಿರುವ ಸಾವಿರಾರು ಮಂದಿ ಇಂದು ಸಾಕ್ಷಿಗಳಾಗಿದ್ದೀರಿ.
ಇಂದು ಶ್ರೀಯುತ ಸಂತೋಷ್ ಹೆಗ್ಡೆಯವರನ್ನು ರೂಪಿಸಿದ್ದು ನನ್ನಂತಹ ಒಬ್ಬ ಶಿಕ್ಷಕರೇ ಆಗಿರಬಹುದು. ಒಬ್ಬ ಶಿಕ್ಷಕ ಪ್ರಯತ್ನ ಪಟ್ಟರೆ ಇಂತಹ ನೂರಾರು ಸಂತೋಷ್ ಹೆಗ್ಡೆಯವರುಗಳನ್ನು ಸೃಷ್ಟಿಸಬಹುದು.
ಇಂದು ನನ್ನ ಸೇವೆಗೆ ದೇವರು ಪ್ರತಿಫಲ ನೀಡಿದ್ದಾನೆ. ರಾಜ್ಯದ ಉದ್ದಗಲಕ್ಕೂ ಬೀದರ್ ನ ಔರಾದ್ ನಿಂದ ದಕ್ಷಿಣದ ಚಾಮರಾಜನಗರ ಸಹಿತ ಅನೇಕ ಜಿಲ್ಲೆಗಳ ಶಿಕ್ಷಕರು, ಸಾವಿರಾರು ವಿದ್ಯಾರ್ಥಿಗಳು ನನ್ನು ಬರಮಾಡಿಕೊಂಡು ಗೌರವಿಸಿದರು. ನನ್ನಲ್ಲಿರುವ ಅಲ್ಪ ಜ್ಞಾನವನ್ನು ಅವರೊಂದಿಗೆ ಹಂಚಿಕೊಂಡಾಗ ಸಂತೋಷಪಟ್ಟರು. ಇದಕ್ಕಿಂತ ಮಿಗಿಲಾದದ್ದು ಒಬ್ಬ ಶಿಕ್ಷಕನಿಗೆ ಇನ್ನೇನು ಬೇಕು.
ಇಂದು ಸಮಾಜ ಶಿಕ್ಷಕರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದೆ. ಒಂದು ಹೆಣ್ಣು ಮಗುವನ್ನು ಯಾವುದೇ ಆತಂಕ, ಭಯವಿಲ್ಲದೆ ಒಬ್ಬ ಶಿಕ್ಷಕನೊಂದಿಗೆ ಕಳುಹಿಸಲು ಹೆತ್ತವರು ಧ್ಯರ್ಯ ತೋರುತ್ತಾರೆ ಎಂದರೆ ಸಮಾಜ ಶಿಕ್ಷಕರ ಮೇಲಿಟ್ಟಿರುವ ಅಪಾರ ನಂಬಿಕೆಯೇ ಕಾರಣ. ಸಮಾಜ ಈ ನಂಬಿಕೆಯನ್ನು ಬೇರೆ ಯಾವುದೇ ವೃತ್ತಿಯಲ್ಲಿರುವವರಲ್ಲಿ ಇಟ್ಟಿಲ್ಲ. ಆ ನಂಬಿಕೆಯನ್ನು ವೃತ್ತಿಜೀವನದ ಪೂರ್ತಿ ಉಳಿಸಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಈಡೇರಿಸುವ ಭರವಸೆ ನೀಡುತ್ತಾ ಮತ್ತೊಮ್ಮೆ ನನ್ನನ್ನು ಗೌರವಿಸಿದ ಯೇನಪೋಯ ಶಿಕ್ಷಣ ಸಂಸ್ಥೆಯ ಸಂಬಂಧಿಸಿದ ಎಲ್ಲರಿಗೂ ನನ್ನ ಹೃದಯಾಂತರಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತಾ ನನ್ನ ಮಾತುಗಳನ್ನು ಕೊನೆಗೊಳಿಸುತ್ತಿದ್ದೇನೆ. ವಂದನೆಗಳು""

1 comments: